ಕಲ್ಲೇರಿ: ತಿಂಗಳಿನಿಂದ ರಸ್ತೆ ಪಾಲಾಗುತ್ತಿದೆ ಕುಡಿಯುವ ನೀರು; ಪಂಚಾಯತ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

 

Ad
ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್ಮೂರು ಗ್ರಾಮದ ಕಲ್ಲೇರಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ ಒಂದು ತಿಂಗಳಿಂದ ತನ್ನದೇ ಆದ ದಾರಿಯನ್ನು ಹುಡುಕಿಕೊಂಡು, ನಿಶ್ಚಿಂತವಾಗಿ ನೀರು ವ್ಯರ್ಥ ಮಾಡುತ್ತಾ ಸಾಗುತ್ತಿದೆ.

ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್ಮೂರು ಗ್ರಾಮದ ಕಲ್ಲೇರಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ. ಪೈಪ್‌ನಿಂದ ಚಿಮ್ಮುತ್ತಿರುವ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ತಲುಪಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ.

​ಅಧಿಕಾರಿಗಳ ಮೌನ:

ಪೈಪ್ ಒಡೆದಿರುವ ವಿಚಾರ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಂಬಂಧಪಟ್ಟ ಸಿಬ್ಬಂದಿಗಳಿಗೆ ತಿಳಿದಿದ್ದರೂ, ಇದುವರೆಗೆ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. "ಸಮಯ ಸಿಕ್ಕಾಗ ಮಾಡೋಣ" ಎಂಬ ಅಧಿಕಾರಿಗಳ ಧೋರಣೆಯಿಂದಾಗಿ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ. ನೀರಿನ ಮೌಲ್ಯದ ಬಗ್ಗೆ ಸಭೆಗಳಲ್ಲಿ ಭಾಷಣ ಮಾಡುವ ಅಧಿಕಾರಿಗಳು, ಕಣ್ಣೆದುರೇ ನೀರು ವ್ಯರ್ಥವಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

​ಸ್ಥಳೀಯರ ಒತ್ತಾಯ:

"ತಿಂಗಳಿನಿಂದ ನೀರು ವ್ಯರ್ಥವಾಗುತ್ತಿದೆ. ನಾವು ಹಲವಾರು ಬಾರಿ ಮನವಿ ಮಾಡಿದರೂ ದುರಸ್ತಿ ಭಾಗ್ಯ ಕೂಡಿ ಬಂದಿಲ್ಲ. ಬೇಸಿಗೆ ಕಾಲ ಹತ್ತಿರ ಬರುತ್ತಿರುವಾಗ ಹೀಗೆ ನೀರು ಪೋಲು ಮಾಡುವುದು ಎಷ್ಟು ಸರಿ?" ಎಂದು ಕಲ್ಲೇರಿ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಪಂಚಾಯತ್ ಆಡಳಿತ ಎಚ್ಚೆತ್ತು ಪೈಪ್ ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Post a Comment

0 Comments