ಡಾಲರ್‌ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ

 

Ad
ಭಾರತದ ರೂಪಾಯಿ ಮೌಲ್ಯವು ಅಮೆರಿಕಾದ ಡಾಲರ್‌ ಎದುರು ದಾಖಲೆ ಮಟ್ಟದಲ್ಲಿ ಕುಸಿತ ಕಾಣುತ್ತಿದ್ದು, ಆರ್ಥಿಕ ವಲಯದಲ್ಲಿ ಆತಂಕ ಮೂಡಿಸಿದೆ. ಕಳೆದ ಮೇ ತಿಂಗಳಿನಲ್ಲಿ 1 ಡಾಲರ್‌ಗೆ ₹84 ವಿನಿಮಯ ದರ ಇತ್ತು. ಆದರೆ, ಪ್ರಸ್ತುತ ಈ ಮೌಲ್ಯವು ₹90 ರ ಗಡಿಯನ್ನು ದಾಟಿದೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ರೂಪಾಯಿ ಮೌಲ್ಯವು ಶೇಕಡಾ 5% ರಷ್ಟು ಕುಸಿದಿದೆ. ಜಗತ್ತಿನ ಜಿಡಿಪಿ ಬೆಳವಣಿಗೆ ದರದಲ್ಲಿ ಭಾರತವು ನಿರಂತರವಾಗಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದ್ದರೂ, ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.

ರೂಪಾಯಿ ಮೌಲ್ಯ ಕುಸಿಯುವ ಮುನ್ನ, ಡಾಲರ್‌ ವಿಶ್ವದ ಅತ್ಯಂತ ಪ್ರಬಲ ಕರೆನ್ಸಿಯಾಗಲು ಕಾರಣಗಳೇನು ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ SWIFT (ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಶಿಯಲ್ ಟೆಲೆಕಮ್ಯುನಿಕೇಶನ್) ನೆಟ್‌ವರ್ಕ್. ಈ ಜಾಗತಿಕ ವ್ಯವಸ್ಥೆಯ ಮೂಲಕವೇ ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರಗಳು ನಡೆಯುತ್ತವೆ. ಈ SWIFT ನೆಟ್‍ವರ್ಕ್‌ನಲ್ಲಿ ಜಾಗತಿಕ ವಿನಿಮಯಕ್ಕೆ ಡಾಲರ್‌ನನ್ನೇ ಮುಖ್ಯವಾಗಿ ಪರಿಗಣಿಸಲಾಗಿರುವುದು ಅದರ ಪ್ರಾಬಲ್ಯಕ್ಕೆ ದೊಡ್ಡ ಕಾರಣವಾಗಿದೆ.

ಇತ್ತೀಚೆಗೆ ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಅಮೆರಿಕಾ ಸರ್ಕಾರದ ನೀತಿಗಳೂ ಸೇರಿವೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಕರೆನ್ಸಿ ಕುಸಿತವು ಹೆಚ್ಚಾಗಿದ್ದು, ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವ ಕಾರಣಕ್ಕೆ ದಂಡವಾಗಿ ಭಾರತದ ಕೆಲವು ವಸ್ತುಗಳ ಮೇಲೆ ಶೇ. 50% ರಷ್ಟು ಸುಂಕ ವಿಧಿಸಲಾಗಿದೆ. ಈ ಸುಂಕದ ಏರಿಕೆಯು ಭಾರತದ ವ್ಯಾಪಾರಕ್ಕೆ ಪೆಟ್ಟು ನೀಡಿದೆ. ಭಾರತದಿಂದ ಅಮೆರಿಕಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳು ರಫ್ತಾಗುತ್ತಿವೆ ಮತ್ತು ಅಲ್ಲಿಂದ ಕಡಿಮೆ ಪ್ರಮಾಣದಲ್ಲಿ ಆಮದಾಗುತ್ತಿದೆ. ಈ ಕಾರಣದಿಂದ ಟ್ರಂಪ್‌ ಆಡಳಿತವು ವ್ಯಾಪಾರ ಕೊರತೆಯನ್ನು ನಿಭಾಯಿಸಲು ಸುಂಕ ಏರಿಸುವ ನಿರ್ಧಾರ ಕೈಗೊಂಡಿರುವುದು ಪ್ರಸ್ತುತ ವ್ಯಾಪಾರದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿ, ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ.

Post a Comment

0 Comments