ವಿಮಾನ ರದ್ದತಿ: ಹುಬ್ಬಳ್ಳಿಯಲ್ಲಿ ಆನ್ಆ ಲೈನ್ ಆರತಕ್ಷತೆ! ವಧು-ವರರು ಭುವನೇಶ್ವರದಿಂದಲೇ ವಿಡಿಯೋ ಮೂಲಕ ಭಾಗವಹಿಸಿದ ಅಪರೂಪದ ಘಟನೆ

 

Ad
ಇಂಡಿಗೋ ಏರ್‌ಲೈನ್ಸ್‌ನ (IndiGo Airlines) ವಿಮಾನ ಕಾರ್ಯಾಚರಣೆಯ ಅಡಚಣೆಯಿಂದಾಗಿ ವಿಮಾನಗಳು ರದ್ದಾದ ಪರಿಣಾಮ, ಹುಬ್ಬಳ್ಳಿಯಲ್ಲಿ ಅಪರೂಪದ ಮತ್ತು ವಿಚಿತ್ರ ಘಟನೆಯೊಂದು ಜರುಗಿದೆ. ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಮತ್ತು ಒಡಿಶಾದ ಸಂಗ್ರಾಮ್ ದಾಸ್ ದಂಪತಿಗಳು ಭುವನೇಶ್ವರದಲ್ಲಿ ವಿವಾಹವಾದ ನಂತರ, ಡಿಸೆಂಬರ್ 3 ರಂದು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ತಮ್ಮ ಆರತಕ್ಷತೆಯನ್ನು ಆಯೋಜಿಸಿದ್ದರು. ಆದರೆ, ವಿಮಾನ ವಿಳಂಬದ ಬಗ್ಗೆ ಇಂಡಿಗೋ ಸಿಬ್ಬಂದಿ 18-20 ಗಂಟೆಗಳ ಕಾಲ ಸರಿಯಾದ ಮಾಹಿತಿ ನೀಡದೆ ಕೊನೆಗೆ ವಿಮಾನವನ್ನು ರದ್ದುಗೊಳಿಸಿದರು. ಇದರಿಂದ ವಧು-ವರರು ನಿಗದಿತ ಸಮಯಕ್ಕೆ ಹುಬ್ಬಳ್ಳಿ ತಲುಪಲಾಗದೆ ಭುವನೇಶ್ವರದಲ್ಲಿಯೇ ಉಳಿಯಬೇಕಾಯಿತು.

ಈ ಅನಿರೀಕ್ಷಿತ ಪರಿಸ್ಥಿತಿಯಿಂದಾಗಿ, ಆರತಕ್ಷತೆಯನ್ನು ರದ್ದುಗೊಳಿಸುವ ಬದಲು ಅದನ್ನು ಆನ್‌ಲೈನ್ (Online) ಮೂಲಕವೇ ನಡೆಸುವ ಅನಿವಾರ್ಯತೆ ಎದುರಾಯಿತು. ವಧುವಿನ ತಂದೆ ಅನಿಲ್ ಕುಮಾರ್ ಕ್ಷೀರಸಾಗರ ಮತ್ತು ತಾಯಿ ವೇದಿಕೆಯಲ್ಲಿ ವಧು-ವರರ ಕುರ್ಚಿಯಲ್ಲಿ ಕುಳಿತು ಶಾಸ್ತ್ರಗಳನ್ನು ನೆರವೇರಿಸಿದರು. ಇತ್ತ, ನವದಂಪತಿಗಳು ಭುವನೇಶ್ವರದಿಂದಲೇ ವೀಡಿಯೊ ಕಾನ್ಫರೆನ್ಸ್‌ (Video Conference) ಮೂಲಕ ಕಾರ್ಯಕ್ರಮಕ್ಕೆ ಸಂಪರ್ಕಗೊಂಡರು. ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕೂಡ ಪರದೆಯ ಮೇಲೆಯೇ ನವದಂಪತಿಗೆ ಆಶೀರ್ವಾದ ಸಲ್ಲಿಸಿದರು. ಇದು ಕಲ್ಯಾಣಮಂಟಪದಲ್ಲಿ ಪೋಷಕರು ವೇದಿಕೆ ಹಿಡಿದು, ಮಧುಮಕ್ಕಳು ಪರದೆ ಮೇಲೆ ಕಾಣಿಸಿಕೊಂಡ ಅಪರೂಪದ ದೃಶ್ಯವಾಗಿತ್ತು.

ಈ ಘಟನೆಗೆ ಸಂಬಂಧಿಸಿ ವಧುವಿನ ತಂದೆ ಅನಿಲ್ ಕುಮಾರ್, "ನಾವು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಿದ್ಧತೆ ಮಾಡಿದ್ದೆವು. ವಿಮಾನ ವಿಳಂಬದ ಬಗ್ಗೆ ಸರಿಯಾದ ಮಾಹಿತಿ ಮೊದಲೇ ಲಭ್ಯವಾಗಿದ್ದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಕೊನೆಯ ಕ್ಷಣದಲ್ಲಿ ವಿಮಾನ ರದ್ದು ಎಂದು ಹೇಳಿದುದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇಂಡಿಗೋ ಸಂಸ್ಥೆಯ ನಿರ್ಲಕ್ಷ್ಯದಿಂದಲೇ ಕಾರ್ಯಕ್ರಮ ಹಾಳಾಗಿದೆಯೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಿತ್ರ 'ವರ್ಚುವಲ್' (Virtual) ಆರತಕ್ಷತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.


Post a Comment

0 Comments