ಕಚೇರಿ ಕೆಲಸದ ಅವಧಿ ಮುಗಿದ ನಂತರವೂ ಉದ್ಯೋಗಿಗಳು ಕೆಲಸಕ್ಕೆ ಸಂಬಂಧಿಸಿದ ಕರೆಗಳು ಮತ್ತು ಇಮೇಲ್‌ಗಳಿಗೆ ಉತ್ತರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಡಲಾಗಿದೆ. 'ರೈಟ್ ಟು ಡಿಸ್‌ಕನೆಕ್ಟ್ ಬಿಲ್’ (ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ) ಖಾಸಗಿ ಸದಸ್ಯರ ಮಸೂದೆಯಾಗಿ ಲೋಕಸಭೆಯಲ್ಲಿ ಮಂಡನೆಯಾಗಿದೆ. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ಮಸೂದೆಯನ್ನು ಮಂಡಿಸಿದ್ದಾರೆ. ಅಧಿಕೃತ ಕೆಲಸದ ಅವಧಿ ಮತ್ತು ರಜಾದಿನಗಳಲ್ಲಿ ಉದ್ಯೋಗದಾತರು ಮಾಡುವ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳು ಮತ್ತು ಸಂದೇಶಗಳಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಪ್ರತಿ ಉದ್ಯೋಗಿಗೆ ಈ ಮಸೂದೆ ಒದಗಿಸುತ್ತದೆ. ನೌಕರರ ಮಾನಸಿಕ ಆರೋಗ್ಯ ಮತ್ತು ಕೆಲಸ-ಜೀವನದ ಸಮತೋಲನವನ್ನು ಕಾಪಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಮಸೂದೆಯಲ್ಲಿ ಉದ್ಯೋಗಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಅಂಶವನ್ನು ಪ್ರಸ್ತಾಪಿಸಲಾಗಿದೆ. ಇದರ ಅಡಿಯಲ್ಲಿ ನೌಕರರ ಕಲ್ಯಾಣ ಪ್ರಾಧಿಕಾರವನ್ನು (Employees' Welfare Authority) ಸ್ಥಾಪಿಸುವ ಪ್ರಸ್ತಾಪವಿದೆ. ಈ ಪ್ರಾಧಿಕಾರವು 'ರೈಟ್ ಟು ಡಿಸ್‌ಕನೆಕ್ಟ್' ಹಕ್ಕಿನ ಅನುಷ್ಠಾನ ಹಾಗೂ ಉದ್ಯೋಗಿಗಳ ಕುಂದುಕೊರತೆಗಳನ್ನು ಪರಿಹರಿಸಲು ಕೆಲಸ ಮಾಡಲಿದೆ. ಸಚಿವರಲ್ಲದ ಸಂಸತ್ತಿನ ಸದಸ್ಯರು ಮಂಡಿಸಿರುವುದರಿಂದ ಇದು ಖಾಸಗಿ ಸದಸ್ಯರ ಮಸೂದೆ (Private Member’s Bill) ಎನಿಸಿಕೊಂಡಿದೆ. ಇದು ಒಬ್ಬ ವ್ಯಕ್ತಿ, ಗುಂಪು ಅಥವಾ ಪ್ರದೇಶದ ಮೇಲೆ ಪರಿಣಾಮ ಬೀರುವ ಕಾನೂನು ಪ್ರಸ್ತಾವನೆಯಾಗಿದೆ ಮತ್ತು ಸಾರ್ವಜನಿಕ ಮಸೂದೆಯಿಂದ (Public Bill) ಭಿನ್ನವಾಗಿದೆ.
ಆದಾಗ್ಯೂ, ಖಾಸಗಿ ಸದಸ್ಯರ ಮಸೂದೆಗಳನ್ನು ಸರ್ಕಾರವು ಅಂಗೀಕರಿಸುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತವೆ. ಸಾಮಾನ್ಯವಾಗಿ, ಸರ್ಕಾರವು ಪ್ರಸ್ತಾವಿತ ಮಸೂದೆಯನ್ನು ಪರಿಗಣಿಸಿ ಅಗತ್ಯವಿದ್ದರೆ ಅದನ್ನು ಹಿಂಪಡೆಯುವಂತೆ ಖಾಸಗಿ ಸದಸ್ಯರನ್ನು ಕೋರುವುದು ವಾಡಿಕೆ. ಒಂದು ವೇಳೆ, ಈ ಮಸೂದೆ ಅಂಗೀಕಾರಗೊಂಡರೆ, ಕೆಲಸದ ಅವಧಿಯ ನಂತರದ ಒತ್ತಡದಿಂದ ಉದ್ಯೋಗಿಗಳು ಮುಕ್ತರಾಗಲಿದ್ದು, ಇದು ಭಾರತೀಯ ಕಾರ್ಮಿಕ ವಲಯದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಬಹುದು. ಸರ್ಕಾರ ಈ ಮಸೂದೆಯ ಬಗ್ಗೆ ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ಉದ್ಯೋಗಿಗಳ ನಿರೀಕ್ಷೆ ನೆಲೆಸಿದೆ.

0 Comments