ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mangaluru International Airport - MIA) ತುರ್ತಾಗಿ "ಪಾಯಿಂಟ್ ಆಫ್ ಕಾಲ್ (PoC)" ಸ್ಥಾನಮಾನ ನೀಡುವ ಅಗತ್ಯತೆಯನ್ನು ಇಂದು ಲೋಕಸಭೆಯಲ್ಲಿ ನಿಯಮ 377 ರ ಅಡಿಯಲ್ಲಿ ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಕರಾವಳಿ ಕರ್ನಾಟಕ ಮತ್ತು ನೆರೆಯ ಕೇರಳಕ್ಕೆ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿರುವ MIA, 2024-25ರ ಅವಧಿಯಲ್ಲಿ 7.15 ಲಕ್ಷ ಅಂತರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಸುಮಾರು 23.4 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಇದು ವಾರ್ಷಿಕವಾಗಿ ಶೇ.15ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಸಂಸದರು ತಿಳಿಸಿದರು. ತುಳುನಾಡು ಪ್ರದೇಶದ ಗಣನೀಯ ಸಂಖ್ಯೆಯ ಜನರು ಗಲ್ಫ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವುದರಿಂದ, ಅವರು ಅಂತರಾಷ್ಟ್ರೀಯ ಪ್ರಯಾಣಕ್ಕಾಗಿ ಇದೇ ವಿಮಾನ ನಿಲ್ದಾಣವನ್ನು ಹೆಚ್ಚು ಅವಲಂಬಿಸಿದ್ದಾರೆ.
ಸಂಸದ ಚೌಟ ಅವರು, ಪ್ರಸ್ತುತ PoC ಸ್ಥಾನಮಾನದ ಕೊರತೆಯಿಂದಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಮಂಗಳೂರಿನಿಂದ ನೇರ ಅಂತರಾಷ್ಟ್ರೀಯ ಸೇವೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸದನಕ್ಕೆ ಮನವರಿಕೆ ಮಾಡಿದರು. ಇದರ ಪರಿಣಾಮವಾಗಿ, ಅನಿವಾಸಿ ಭಾರತೀಯ ಸಮುದಾಯವು ನೇರ ವಿಮಾನಗಳಿಲ್ಲದೆ ಬೆಂಗಳೂರು ಅಥವಾ ಕೊಚ್ಚಿನ್ ಮೂಲಕ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ದುಬಾರಿ ವೆಚ್ಚ ಮತ್ತು ದೀರ್ಘ ಪ್ರಯಾಣದ ಸಮಯ ಸೇರಿದಂತೆ ಹಲವು ಅನಾನುಕೂಲತೆಗಳನ್ನು ಎದುರಿಸಬೇಕಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಈ ಭಾಗದ ಜನರ ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು PoC ಸ್ಥಾನಮಾನ ನೀಡುವುದು ಅನಿವಾರ್ಯ ಎಂದು ಅವರು ಒತ್ತಿ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ PoC ಸ್ಥಾನಮಾನ ನೀಡುವುದರಿಂದ ಆಗುವ ಆರ್ಥಿಕ ಪ್ರಯೋಜನಗಳನ್ನು ಸಂಸದರು ವಿವರಿಸಿದರು. ನೇರ ಅಂತರಾಷ್ಟ್ರೀಯ ಸಂಪರ್ಕವು ವ್ಯಾಪಾರ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಇದು ಸಾಗರೋತ್ತರ ಉತ್ಪನ್ನಗಳ ರಫ್ತು, ಅಡಿಕೆ, ಗೋಡಂಬಿ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್‌ಗಳಂತಹ ಪ್ರಾದೇಶಿಕ ಉದ್ಯಮಗಳಿಗೆ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯದ (SEZ) ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಲ್ಲದೆ, ಇದು ಕರಾವಳಿ ಭಾಗದ ಪ್ರವಾಸೋದ್ಯಮ ಮತ್ತು NITK ಸುರತ್ಕಲ್ ಮತ್ತು ಮಣಿಪಾಲ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಅಂತರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು. ನಾಗರಿಕ ವಿಮಾನಯಾನ ಸಚಿವರು ತಕ್ಷಣ ಮಧ್ಯಪ್ರವೇಶಿಸಿ, ಪ್ರಾದೇಶಿಕ ಅಭಿವೃದ್ಧಿ ಮತ್ತು ಜಾಗತಿಕ ಸಂಪರ್ಕ ಸುಧಾರಣೆ ದೃಷ್ಟಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ 'ಪಾಯಿಂಟ್ ಆಫ್ ಕಾಲ್' ಮಾನ್ಯತೆ ನೀಡಬೇಕೆಂದು ಕ್ಯಾ. ಚೌಟ ಅವರು ಮನವಿ ಮಾಡಿದರು.

0 Comments