ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದೊಡ್ಡ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿರುವ ಘಟನೆಯಲ್ಲಿ, ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಲನುಭವಿಸಿದೆ.
ಶುಕ್ರವಾರ ನಡೆದ ಮತದಾನದಲ್ಲಿ ಒಟ್ಟು 540 ಸಂಸದರ ಪೈಕಿ 526 ಮಂದಿ ಮತದಾನದಲ್ಲಿ ಭಾಗವಹಿಸಿದರು. ಮಸೂದೆಗೆ 298 ಮಂದಿ ಪರವಾಗಿ ಮತ ಚಲಾಯಿಸಿದರೆ, 230 ಮಂದಿ ವಿರೋಧಿಸಿದರು. ಇದು ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಮೂರನೇ ಎರಡರಷ್ಟು ಬಹುಮತ (ಸುಮಾರು 352 ಮತಗಳು) ಅಗತ್ಯವಿತ್ತು. ಆದರೆ ಅಗತ್ಯ ಸಂಖ್ಯೆಗೆ ತಲುಪದ ಕಾರಣ ಮಸೂದೆ ತಿರಸ್ಕೃತವಾಯಿತು.
ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿಗೆ ತರಲು ಹಾಗೂ ಹೊಸ ಜನಗಣತಿಯಿಲ್ಲದೇ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಾಡಲು ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಆದರೆ ಈ ಪ್ರಮುಖ ಅಂಶವೇ ವಿರೋಧ ಪಕ್ಷಗಳ ತೀವ್ರ ವಿರೋಧಕ್ಕೆ ಕಾರಣವಾಯಿತು.
ಸರ್ಕಾರವು ಈ ಸಂಬಂಧ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿತ್ತು:
ಸಂವಿಧಾನ ತಿದ್ದುಪಡಿ ಮಸೂದೆ
ಕ್ಷೇತ್ರ ಮರುವಿಂಗಡಣಾ (ಡಿಲಿಮಿಟೇಶನ್) ಮಸೂದೆ, 2026
ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026
ಈ ಮಸೂದೆಗಳನ್ನು ಗುರುವಾರ ಸದನದಲ್ಲಿ ಮಂಡಿಸಲಾಗಿದ್ದು, ವಿರೋಧ ಪಕ್ಷಗಳು ಧ್ವನಿ ಮತದ ಬದಲು ಮತ ವಿಭಜನೆಗೆ ಒತ್ತಾಯಿಸಿತು. ಆರಂಭಿಕ ಹಂತದ ಮತದಾನದಲ್ಲಿ 251 ಮಂದಿ ಪರವಾಗಿ ಮತ್ತು 185 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದರು.
‘ನಾರಿ ಶಕ್ತಿ ವಂದನ್ ಅಧಿನಿಯಮ’ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೆ ತರಲು ಏಪ್ರಿಲ್ 16 ರಿಂದ 18ರವರೆಗೆ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ ಅಂತಿಮವಾಗಿ ಮಸೂದೆ ಸೋಲಿರುವುದು ಸರ್ಕಾರದ ಪ್ರಮುಖ ಯೋಜನೆಗೆ ದೊಡ್ಡ ಹೊಡೆತ ನೀಡಿದೆ.


0 Comments