🛕ಬರೆಪ್ಪಾಡಿ: ಪಾಂಡವರಿಂದ ಪ್ರತಿಷ್ಠಾಪಿತ ಪಂಚಲಿಂಗೇಶ್ವರ ಸಾನಿಧ್ಯದಲ್ಲಿ ಶ್ರಾವಣ ಶನಿವಾರ ಪವಿತ್ರ ತೀರ್ಥಸ್ಥಾನ📣

ದೇವಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಗ್ರಾಮವು ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಸುಮಾರು 800 ವರ್ಷಗಳ ಹಿಂದೆ ವಿಜಯನಗರದ ಅರಸರ ಕಾಲದಲ್ಲಿ  ಪಂಚಲಿಂಗೇಶ್ವರ ಹಾಗೂ ಬಂಧುಕೇಶ್ವರ(ಕೇಪುಳೇಶ್ವರ) ದೇವಾಲಯಗಳು ನಿರ್ಮಾಣಗೊಂಡಿವೆ ಎಂದು ಶಿಲಾ ಶಾಸನಗಳು ಸಾರುತ್ತಿವೆ.ಈ ಎರಡು ದೇವಾಲಯಗಳು ಒಂದೇ ಅಂಗಣದಲ್ಲಿದ್ದು ಬಹಳಷ್ಟು ವೈಶಿಷ್ಟ್ಯವನ್ನು ಹೊಂದಿದೆ

ಕ್ಷೇತ್ರಪುರಾಣದ ಪ್ರಕಾರ, ಪಾಂಡವರು ದೇಶಪರ್ಯಟನೆ ಸಂದರ್ಭದಲ್ಲಿ ಇಲ್ಲಿ ತಂಗಿದ್ದು, ತಮ್ಮ ನಿತ್ಯ ಪೂಜಾಕೈಂಕರ್ಯಕ್ಕಾಗಿ ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿದರು. ಇದರಿಂದಾಗಿ ದೇವರು "ಪಂಚಲಿಂಗೇಶ್ವರ" ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು.

ಇಲ್ಲಿ ನೆಲೆಸಿರುವ ಬಂಧುಕೇಶ್ವರ [ಕೇಪುಳೇಶ್ವರ] ದೇವರು ತುಳಸಿಗುಡ್ಡೆಯಲ್ಲಿ ನೆಲೆಯಾಗಿದ್ದರು. ಈ ಎರಡು ಪವಿತ್ರ ಸ್ಥಳಗಳಲ್ಲಿ ಒಬ್ಬರೇ ಅರ್ಚಕರು ಪೂಜಾದಿ ಕೈಂಕರ್ಯಗಳನ್ನು ನಡೆಸುತ್ತಿದ್ದು, ಅರ್ಚಕರ ಪತ್ನಿ ಸಹಾಯಕ್ಕಾಗಿ ಹೂ, ಬಿಲ್ವಪತ್ರೆ, ಪೂಜಾ ಸಾಮಾಗ್ರಿಗಳನ್ನು ಜೋಡಿಸಿಕೊಂಡುಹೋಗಿ ಕೊಡುತ್ತಿದ್ದರು. ಹೀಗಿರುವಲ್ಲಿ ಅರ್ಚಕರ ಪತ್ನಿ ಗರ್ಭಿಣಿಯಾದ ಸಂದರ್ಭ ತುಳಸಿಗುಡ್ಡ ಏರಿ ಬಂಧುಕೇಶ್ವರನ [ಕೇಪುಳೇಶ್ವರ) ಸನ್ನಿಧಿಗೆ ಹೋಗಲು ತುಂಬಾ ಪ್ರಯಾಸಪಡಬೇಕಾಗಿತ್ತು. ಆ ಸಂದರ್ಭ ಆಕೆ "ದೇವರೇ ನೀನು ಕೆಳಗೆ ಇರುತ್ತಿದ್ದರೆ ನಾನು ಮುಂದೆಯೂ ನಿನ್ನ ಪೂಜೆಯಲ್ಲಿ ಪಾಲ್ಗೊಳ್ಳಬಹುದಿತ್ತು."ಎಂದು ಭಿನ್ನವಿಸಿಕೊಂಡರಂತೆ.
ಅದರಂತೆ ಮಾರನೇ ದಿನ ನೋಡಿದಾಗ ಶಿವಲಿಂಗವು ತುಳಸಿ ಗುಡ್ಡೆಯ ಕೆಳಭಾಗದಲ್ಲಿ ಕೇಪುಳ ಗಿಡದ ಬುಡದಲ್ಲಿ ಲಿಂಗ ಉದ್ಭವವಾದ ಕಾರಣ ಬಂಧುಕೇಶ್ವರ ಎಂಬ ಹೆಸರು ಪಡೆದು ತುಳುವಿನಲ್ಲಿ ಕೇಪುಳೇಶ್ವರ ಎಂದು ಪ್ರಸಿದ್ದಿ ಪಡೆಯಿತ್ತು.

ಪಂಚಪಾಂಡವರು ಇಲ್ಲಿ ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿದ ನಂತರ ದೇವರಿಗೆ ಶೋಡಷೋಪಚಾರ ಪೂಜೆ ಸಲ್ಲಿಸಲು ಪುಣ್ಯ ಜಲದ ಅವಶ್ಯಕತೆಯಾಯಿತು. ಇದಕ್ಕಾಗಿ ವಾಯುಪುತ್ರ ಭೀಮನು ಕಾಶಿಯಿಂದ ಗಂಗಾಜಲ ತರುವ ಉದ್ದೇಶದಿಂದ ವಾಯುವೇಗದಲ್ಲಿ ತೆರಳಿದನು.ಆದರೆ ಭೀಮನು ಜಲ ತರುವುದಕ್ಕೆ ಮುಹೂರ್ತ ಮೀರಿದ ಕಾರಣ, ಉಳಿದ ಪಾಂಡವರು ಸುಮೂಹುರ್ತದಲ್ಲಿ ದೇವರ ಪೂಜಾಕೈಂಕರ್ಯವನ್ನು ನೆರವೇರಿಸಿದರು. ತಾನು ಬರುವಾಗ
ದೇವರ ಪೂಜಾಕೈಂಕರ್ಯವು ಮುಗಿದಿರುವುದು ಕಂಡು ಸಹೋದರರ ಮೇಲೆ ಕೋಪಗೊಂಡು ಭೀಮನು ತನ್ನ ಕಿರು ಬೆರಳಿನಿಂದ ಭೂಮಿಯ ಮಣ್ಣನು ಅದುಮಿದಾಗ ಹೊಂಡವಾಗಿ ಅದು ಬಾವಿಯ ರೂಪ ತಳೆಯಿತು. ತಾನು ಕಾಶಿಯಿಂದ ತಂದ ಗಂಗಾಜಲವನ್ನು ಆ ಬಾವಿಗೆ ಸುರಿದನು ಎಂಬ ಪ್ರತೀತಿ ಇದೆ.

ಟೆಂಪಲ್

ಕೇವಲ 10 ಅಡಿ ಆಳವಿರುವ ಈ ಬಾವಿಯಲ್ಲಿ ಎಂಥಹ ಬೇಸಿಗೆಯಲ್ಲೂ ಇದುವರೆಗೂ ನೀರು ಬತ್ತಿ ಹೋಗಿಲ್ಲ ಮತ್ತು ಕಾವೇರಿ ಸಂಕ್ರಮಣದಂದು ತಲಕಾವೇರಿಯಲ್ಲಿ ತೀರ್ಥ ಉದ್ಭವ ಆಗುವ ಸಮಯದಲ್ಲಿ ಈ ಬಾವಿಯಲೂನೀರು ಚಿಮ್ಮುತ್ತದೆ.  
ತುಳು ತಿಂಗಳ ಸೋಣದಲ್ಲಿ ಬರುವ ಪ್ರತಿ ಶನಿವಾರಗಳಂದು ಊರ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ತೀರ್ಥಸ್ನಾನಕ್ಕಾಗಿ ಬರುವ ವಾಡಿಕೆಯಿದೆ.ಮದುವೆ ನಿಶ್ಚಯವಾದ ಗಂಡು ಅಥವಾ ಹೆಣ್ಣುಮಕ್ಕಳು ಮದುವೆಗೆ ಮುನ್ನ ಈ ದೇವಾಲಯಕ್ಕೆ ಬಂದು ಪವಿತ್ರ ತೀರ್ಥಸ್ನಾನ ಮಾಡಿಕೊಂಡು ಹೋಗುತ್ತಾರೆ.ಮದುವೆಯಾದ ನಂತರವೂ ಮೊದಲ ವರ್ಷದ ಸೋಣ ತಿಂಗಳ ಒಂದು ಶನಿವಾರದಂದು ದಂಪತಿ ಸಮೇತ ಬಂದು ತೀರ್ಥ ಸ್ನಾನ ಮಾಡಿಕೊಂಡು ಹೋಗುವ ಪದ್ದತಿ ಇದೆ ಇಲ್ಲಿ ತೀರ್ಥಸ್ನಾನ ಮಾಡಿದರೆ ಚರ್ಮರೋಗ, ಕೆಡುಗಳು ವಾಸಿಯಾಗುತ್ತವೆ. ಇದು ವಿಶೇಷ ಔಷಧೀಯ ಗುಣವನ್ನು ಹೊಂದಿರುತ್ತದೆ ಎಂಬ ನಿದರ್ಶನಗಳು ಇದೆ.

ಕುದ್ಮಾರು ಗ್ರಾಮದ ಮಧ್ಯ ಭಾಗದಲ್ಲಿ ದಾರಂದ ಕೆರೆಯಿದೆ. ವನ್ಯ ಜೀವಿಗಳು ಹಾಗೂ ಜನೋಪಯೋಗಕ್ಕಾಗಿ ಭೀಮನು ಈ ಕೆರೆಯನ್ನು ನಿರ್ಮಾಣ ಮಾಡಿದನೆಂಬ ಪ್ರತೀತಿ, ಭೀಮನು ಒಂದು ಹಾರೆ ಮಣ್ಣು ತೆಗೆದು ಎಡೆದಾಗ ಆ ಮಣ್ಣು ಬಿದ್ದ ಜಾಗ ಬೃಹದಾಕಾರದ ಗುಡ್ಡದ ರೂಪ ಪಡೆಯಿತು. ದೈವಾಂಶ ಸಂಭೂತರಿಂದ ತಳೆಯಲ್ಪಟ್ಟ ಈ ಗುಡ್ಡವು "ದೇವರಗುಡ್ಡ" ವೆಂದು ಪ್ರಸಿದ್ದಿ ಪಡೆಯಿತ್ತು.ಹೀಗೆ ಮಣ್ಣನ್ನು ಹಾರೆಯಿಂದ ಎಸೆದಾಗ ಅದರಿಂದ ಬೇರ್ಪಟ್ಟ ಸ್ವಲ್ಪ ಮಣ್ಣಿನ ಭಾಗವು ಅದರ ಪಕ್ಕದಲ್ಲೇ ಬಿದ್ದು ಇನ್ನೊಂದು ಸಣ್ಣ ಗುಡ್ಡೆಯ ರೂಪ ಪಡೆಯಿತು. ಮುಂದೆ ಇದು "ತುಳಸಿಗುಡ್ಡ" ಎಂದು ಪ್ರಸಿದ್ದಿ ಪಡೆಯಿತು. ಈ ಗುಡ್ಡವು ಬಂಧುಕೇಶ್ವರ ದೇವರ ಮೂಲಸ್ಥಾನ ಎಂದು ಪ್ರತೀತಿ. ಕೊನೆಯಲ್ಲಿ ಹಾರೆಯಲ್ಲಿ ಅಂಟಿದ್ದ ಹಿಡಿಮಣ್ಣಿನ ಭಾಗವನ್ನು ಹಾರೆಯಿಂದ ಬೇರ್ಪಡಿಸಿ ಎಸೆದು ಆ ಮಣ್ಣು ಬಿದ್ದ ಸ್ಥಳವನ್ನು "ನಡುಗುಡ್ಡೆ" ಎಂದು ಹೇಳಲಾಗುತ್ತದೆ.

Tempal

ದೇವಾಲಯದ ಹೊರಗೆ ಮುಂಭಾಗದಲ್ಲಿ ಹೊರಾಂಗಣಕ್ಕೆ ತಾಗಿಕೊಂಡು ಚೌಕಾಕಾರದ ಸುಂದರವಾದ ಕೆರೆಯಿದೆ. ಈ ಹಳೆಯ ಕೆರೆಯ ಸುತ್ತಲೂ ಕಾಡುಕಲ್ಲಿನಿಂದ ಕಟ್ಟಲ್ಪಟ್ಟ ಸುಂದರವಾದ ಮೆಟ್ಟಿಲುಗಳಿಂದ ಕೂಡಿದ್ದು ಹಿಂದೆ ಈ ಕೆರೆಯಲ್ಲಿ ಯಾವಾಗಲೂ ನೀರು ತುಂಬಿರುತ್ತಿತ್ತು
ಹೀಗೆ ರಮ್ಯ ರಮಣೀಯ ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ದೇವಾಲಯ ವಿಶೇಷ ಕಲೆ, ನೆಲೆಯನ್ನು ಹೊಂದಿದ್ದು ಭಕ್ತಾಧಿಗಳ ನೆಮ್ಮದಿಯ ತಾಣವಾಗಿದೆ. 

ಹೀಗೆ ಪೌರಾಣಿಕ ಇತಿಹಾಸ ಹಿನ್ನೆಲೆಯಿರುವ ಈ ದೇವಸ್ಥಾನದ ಸುತ್ತುಪೌಳಿ, ನಮಸ್ಕಾರ ಮಂಟಪ, ಎರಡೂ ದೇವರ ಗರ್ಭಗುಡಿಯು ಶಿಥಿಲಾವಸ್ಥೆಗೆ ತಲುಪಿದೆ. ಆದರೂ ದೇವರಿಗೆ ಅನುವಂಶೀಯ ಮೊತ್ತೇಸರರಿಂದ ನಿತ್ಯ ಪೂಜೆ ನಡೆಯುತ್ತಿತ್ತು. ದೇವಸ್ಥಾನದ ಅನುವಂಶೀಯ ಮೊತ್ತೇಸರರ ನೇತೃತ್ವದಲ್ಲಿ ದೇವಸ್ಥಾನದಲ್ಲಿ 30 ವರ್ಷಗಳಿಂದ ಸಾಮೂಹಿಕ ಶಿವರಾತ್ರಿ ಉತ್ಸವ ನಡೆಯುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಉಪದೇವರಾದ ಶಾಸ್ತಾರ, ವೀರಭದ್ರ ಗುಡಿ ಇದೆ. ದೈವಗಳಾದ ವ್ಯಾಘ್ರ ಚಾಮುಂಡಿ, ರಾಜನ್ ದೈವ, ಕಾಸ್ಟಾಡಿ ದೈವಗಳ ಸಾನಿಧ್ಯವಿದೆ.

 ಈ ಎಲ್ಲಾ ದೈವ ದೇವರ ಆಶೀರ್ವಾದದಿಂದ ಸುಮಾರು ವರ್ಷಗಳ ಭಕ್ತರ ಕನಸು ನನಸಾಗುವ ಸೂಚನೆ ಸ್ಥಳ ಸಾನಿಧ್ಯದಲ್ಲಿ ಕಂಡುಬಂದಿದೆ. ಈಗಾಗಲೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಶ್ರೀಯುತ ರಾಮಚಂದ್ರನ್ ತಚ್ಚಂಗಾಡ್ ಅವರ ಮುಖೇನ ಅಷ್ಟಮಂಗಲ ಪ್ರಶ್ನಾಚಿಂತನೆ ಮಾಡಲಾಗಿದೆ. ಸರ್ವ ಭಕ್ತರ ಸಹಕಾರದಿಂದ 2026ಕ್ಕೆ ಜೀರ್ಣೋದ್ದಾರ ಬ್ರಹ್ಮಕಲಶ ಮಾಡುವುದೆಂದು ನಿಶ್ಚಯಿಸಲಾಗಿದೆ. ಸರ್ವ ಭಕ್ತ ಜನರ ಸಹಕಾರ ಕೋರಲಾಗಿದೆ.

                                                                      - ಸಂಗ್ರಹ



Post a Comment

0 Comments