ಶಾರದೀಯ ನವರಾತ್ರಿಯ ಪವಿತ್ರ ದಿನಗಳು ಆರಂಭವಾಗಿದ್ದು, ಇಂದು (ಸೆಪ್ಟೆಂಬರ್ 28) ಏಳನೇ ದಿನದ ಸಪ್ತಮಿ ಆಚರಣೆಯಾಗಿದೆ. ಈ ದಿನವನ್ನು ದುರ್ಗಾದೇವಿಯ ಏಳನೇ ರೂಪವಾದ ಕಾಳರಾತ್ರಿ ದೇವಿಯ ಆರಾಧನೆಗೆ ಮೀಸಲಾಗಿರುತ್ತದೆ. ಭಯಾನಕ ಸ್ವರೂಪವನ್ನು ಹೊಂದಿದ್ದರೂ, ಯಾವಾಗಲೂ ಶುಭಫಲವನ್ನು ನೀಡುವುದರಿಂದ ಕಾಳರಾತ್ರಿಯನ್ನು “ಶುಭಂಕರಿ” ಎಂದೂ ಕರೆಯಲಾಗುತ್ತದೆ.
ಕಾಳರಾತ್ರಿ ತಾಯಿಯ ಸ್ವರೂಪ
ಕಾಳರಾತ್ರಿ ದೇವಿಯ ದೇಹ ಸಂಪೂರ್ಣ ಕಪ್ಪು ಬಣ್ಣದ್ದಾಗಿದೆ. ತಲೆಯ ಮೇಲಿನ ಕೂದಲು ಚೆಲ್ಲಾಪಿಲ್ಲಿಯಾಗಿ, ಮುಖದಲ್ಲಿ ಮೂರು ಕಣ್ಣುಗಳಿವೆ. ಕೊರಳಲ್ಲಿ ಮುಂಡಗಳ ಮಾಲೆ, ಉಸಿರಿನಿಂದ ಬೆಂಕಿಯ ಜ್ವಾಲೆಗಳು ಹೊರಬರುತ್ತವೆ. ದೇವಿಯ ವಾಹನ ಕತ್ತೆಯಾಗಿದ್ದು, ಬಲಗೈಯಲ್ಲಿ ವರಮುದ್ರ ಮತ್ತು ಅಭಯಮುದ್ರೆಗಳಿವೆ. ಎಡಗೈಯಲ್ಲಿ ಕತ್ತಿ ಮತ್ತು ಕಠಾರಿ ಹಿಡಿದಿರುತ್ತಾಳೆ.
ನೈವೇದ್ಯ ಮತ್ತು ಹೂವುಗಳು
ಈ ದಿನ ತಾಯಿಗೆ ಬೆಲ್ಲದಿಂದ ತಯಾರಿಸಿದ ಸಿಹಿತಿನಿಸುಗಳನ್ನು ಅರ್ಪಿಸಿ, ಕೆಂಪು ಚಂಪಾ ಹೂವುಗಳಿಂದ ಪೂಜಿಸಲಾಗುತ್ತದೆ.
ಪೂಜಾ ವಿಧಾನ
ಬೆಳಿಗ್ಗೆ ಸ್ನಾನಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು.
ದೇವಾಲಯ ಅಥವಾ ಮನೆಯಲ್ಲಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು.
ತುಪ್ಪದ ದೀಪ ಹಚ್ಚಿ ಕೆಂಪು ಹೂವುಗಳನ್ನು ಅರ್ಪಿಸಬೇಕು.
ಸಿಹಿತಿಂಡಿಗಳು, ಪಂಚ ಒಣಹಣ್ಣು, ಹಣ್ಣುಗಳು, ಧೂಪ, ಹೂವು ಹಾಗೂ ಬೆಲ್ಲದ ನೈವೇದ್ಯ ಅರ್ಪಿಸಬೇಕು.
ಆರತಿ ಮಾಡಿ, ದುರ್ಗಾಸಪ್ತಶತಿ ಅಥವಾ ದುರ್ಗಾಚಾಲೀಸಾ ಪಠಿಸಬೇಕು.
ಮಂತ್ರ
“ಓಂ ದೇವೀ ಕಾಲರಾತ್ರ್ಯೈ ನಮಃ॥”
ವಿಶೇಷ ಮಹತ್ವ
ಪುರಾಣಗಳಲ್ಲಿ ಕಾಳರಾತ್ರಿಯನ್ನು ಶನಿ ಗ್ರಹದ ನಿಯಂತ್ರಕ ದೇವತೆ ಎಂದು ವರ್ಣಿಸಲಾಗಿದೆ. ಅವಳ ಆರಾಧನೆಯಿಂದ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಸಪ್ತಮಿಯ ರಾತ್ರಿ ಸಾಧನೆಗಳ ರಾತ್ರಿಯಾಗಿ ಪರಿಗಣಿಸಲ್ಪಟ್ಟಿದ್ದು, ಈ ದಿನ ತಾಂತ್ರಿಕ ದೇವಿಯ ಪೂಜೆಗೆ ವಿಶೇಷ ಮಹತ್ವವಿದೆ.
ಈ ನವರಾತ್ರಿಯ ಸಪ್ತಮಿಯಲ್ಲಿ ತಾಯಿ ಕಾಳರಾತ್ರಿ ಭಕ್ತರ ದುಃಖಗಳನ್ನು ನಿವಾರಿಸಿ, ಜೀವನದಲ್ಲಿ ಶಕ್ತಿ, ಸಂತೋಷ ಹಾಗೂ ಶುಭ ಫಲಿತಾಂಶಗಳನ್ನು ನೀಡಲಿ ಎಂದು ಭಕ್ತರು ಪ್ರಾರ್ಥಿಸುತ್ತಾರೆ.



0 Comments