ಬಿಸಿಲೆ ಘಾಟ್‌ ಬಸ್ ದುರಂತ: ಗಾಯಾಳುವಿನ ಆಂಬ್ಯುಲೆನ್ಸ್‌ಗೆ ಅಡ್ಡ ಬಂದ ಸ್ಕೂಟಿ ಸವಾರನ ಹುಚ್ಚಾಟ! 4 ಕಿ.ಮೀ. ಸತಾಯಿಸಿದ ಕಿಡಿಗೇಡಿ ವಶಕ್ಕೆ

 

Ad
ಬಂಟ್ವಾಳ/ಪುತ್ತೂರು: ಸುಬ್ರಹ್ಮಣ್ಯಕ್ಕೆ ಮದುವೆಗೆ ಆಗಮಿಸುತ್ತಿದ್ದ ಬಸ್ಸೊಂದು ಬಿಸಿಲೆ ಘಾಟ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಈ ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ, ಸ್ಕೂಟಿ ಸವಾರನೊಬ್ಬ ಅಮಾನವೀಯ ವರ್ತನೆ ಮೆರೆದ ಘಟನೆ ನಡೆದಿದೆ. ಸುಮಾರು 4 ಕಿಲೋಮೀಟರ್ ದೂರದವರೆಗೆ ಅಂಬ್ಯುಲೆನ್ಸ್‌ಗೆ ಅಡ್ಡ ಬಂದು ಸತಾಯಿಸಿದ ಸ್ಕೂಟಿ ಸವಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad


ದಿನಾಂಕ 30.10.2025 ರಂದು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಬಿಸಿಲೆ ಘಾಟ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಈ ದುರ್ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಕೂಡಲೇ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಿಗೆ ಅಲ್ಲಿನ ವೈದ್ಯರು ತುರ್ತು ಚಿಕಿತ್ಸೆ ನೀಡಿ, ತೀವ್ರ ಗಾಯಗೊಂಡಿದ್ದ ಮಹಿಳಾ ರೋಗಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ತುರ್ತಾಗಿ ಸಾಗಿಸುವ ಅವಶ್ಯಕತೆ ಉಂಟಾಯಿತು.

KA.22.C.1382 ಸಂಖ್ಯೆಯ ಆಂಬ್ಯುಲೆನ್ಸ್‌ನಲ್ಲಿ ಮಹಿಳಾ ಗಾಯಾಳುವನ್ನು ಪುತ್ತೂರಿನಿಂದ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಸಮಯ ಮಧ್ಯಾಹ್ನ 1.30 ಗಂಟೆಗೆ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಎನ್‌ಜಿ ಸರ್ಕಲ್ ಬಳಿ ಈ ಅಮಾನವೀಯ ಘಟನೆ ನಡೆದಿದೆ. ಆಂಬ್ಯುಲೆನ್ಸ್‌ನ ಮುಂದಿನಿಂದ ಸಾಗುತ್ತಿದ್ದ KA.19.EK.0696 ಸಂಖ್ಯೆಯ ದ್ವಿಚಕ್ರ ವಾಹನ (ಸ್ಕೂಟಿ) ಸವಾರನು, ಆಂಬ್ಯುಲೆನ್ಸ್‌ನ ಸೈರನ್ ಮತ್ತು ಚಾಲಕನ ಹಾರ್ನ್ ಶಬ್ದ ಕೇಳಿಯೂ ದಾರಿ ಬಿಟ್ಟುಕೊಡಲು ನಿರಾಕರಿಸಿದ್ದಾನೆ. ಸುಮಾರು 4 ಕಿ.ಮೀ. ದೂರದವರೆಗೆ ಅಂಬ್ಯುಲೆನ್ಸ್‌ಗೆ ಅಡಚಣೆ ಉಂಟುಮಾಡಿ, ತುರ್ತಾಗಿ ಸಾಗಬೇಕಿದ್ದ ಗಾಯಾಳಿಗೆ ತೊಂದರೆ ನೀಡಿದ್ದಾನೆ.

ಆಂಬ್ಯುಲೆನ್ಸ್ ಸಹಚಾಲಕ ಕಾರ್ತಿಕ್ ಅವರು, ಸ್ಕೂಟಿ ಸವಾರನ ಈ ಹುಚ್ಚಾಟವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು, ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ, ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ವ್ಯಕ್ತಿಯಾದ, ಮಹಮ್ಮದ್ ಮನ್ಸೂರು (38 ವರ್ಷ), ಬೆಟ್ಟಂಪಾಡಿ ಗ್ರಾಮ, ಪುತ್ತೂರು ತಾಲೂಕು ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 128/2025 ಕ. ಲಂ:110, 125 ಬಿ. ಏನ್. ಎಸ್. ನಂತೆ ಪ್ರಕರಣ ದಾಖಲಿಸಲಾಗಿದೆ. ವಶಕ್ಕೆ ಪಡೆದ ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.



Post a Comment

0 Comments