ಉತ್ತರಾಖಂಡ: ಸರ್ಕಾರಿ ಶಾಲೆಯ ಬಳಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; 161 ಜೆಲಾಟಿನ್ ಕಡ್ಡಿಗಳು ವಶ

 

Ad
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ದಬಾರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶಾಲೆಯ ಆವರಣದ ಪೊದೆಯೊಂದರಲ್ಲಿ ಬರೋಬ್ಬರಿ 20 ಕೆಜಿಗೂ ಹೆಚ್ಚು ತೂಕದ 161 ಜೆಲಾಟಿನ್ ಕಡ್ಡಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಸುಭಾಷ್ ಸಿಂಗ್ ಅವರು ಪೊದೆಯಲ್ಲಿ ಅನುಮಾನಾಸ್ಪದ ಪ್ಯಾಕೆಟ್ ಇರುವುದನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವನ್ನು ಕರೆಸಿ ತೀವ್ರ ಶೋಧ ನಡೆಸಿದರು. ಈ ವೇಳೆ ಪೊದೆಗಳಲ್ಲಿ ಮತ್ತು ಸುಮಾರು 20 ಅಡಿ ದೂರದಲ್ಲಿ ಬಚ್ಚಿಟ್ಟಿದ್ದ ಜೆಲಾಟಿನ್ ಪ್ಯಾಕೆಟ್‌ಗಳನ್ನು ಬಾಂಬ್ ನಿಷ್ಕ್ರಿಯ ದಳ ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿದೆ. ಸಾಮಾನ್ಯವಾಗಿ ಗಣಿಗಾರಿಕೆ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಬಂಡೆಗಳನ್ನು ಸ್ಫೋಟಿಸಲು ಈ ರೀತಿಯ ಜೆಲಾಟಿನ್ ಕಡ್ಡಿಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದೇವೇಂದ್ರ ಪಿಂಚ, ಸ್ಫೋಟಕಗಳು ಇಲ್ಲಿಗೆ ಹೇಗೆ ಬಂದವು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಅಪರಿಚಿತರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ 1908 ರ ಸೆಕ್ಷನ್ 4 (ಎ) ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 288 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಮತ್ತು ಹೆಚ್ಚಿನ ತನಿಖೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

Post a Comment

0 Comments