ಕೊಚ್ಚಿ: "ಸ್ವರ್ಗದಲ್ಲೇ ಮದುವೆ ನಿಶ್ಚಯವಾಗಿರುತ್ತದೆ" ಎಂಬ ಮಾತಿಗೆ ಸಾಕ್ಷಿಯೆಂಬಂತೆ, ಕೇರಳದ ಕೊಚ್ಚಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ, ವರ ಅಲ್ಲಿಯೇ ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಚ್ಚಿಯ ವಿಪಿಎಸ್ ಲೇಕ್ಶೋರ್ ಆಸ್ಪತ್ರೆಯಲ್ಲಿ ಶುಕ್ರವಾರ ಈ ವಿಶೇಷ ಮದುವೆ ಜರುಗಿದ್ದು, ಅಲಪ್ಪುಳದ ಕೊಮ್ಮಡಿಯ ಅವನಿ ಮತ್ತು ತುಂಬೋಲಿಯ ವಿ.ಎಂ. ಶರೋನ್ ಆಸ್ಪತ್ರೆಯನ್ನೇ ಕಲ್ಯಾಣ ಮಂಟಪವನ್ನಾಗಿ ಮಾಡಿಕೊಂಡ ಜೋಡಿಯಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ 12.15ರಿಂದ 12.30ರ ನಡುವೆ ವಿವಾಹ ಮುಹೂರ್ತ ನಿಗದಿಯಾಗಿತ್ತು. ಆದರೆ, ಬೆಳಿಗ್ಗೆ ಮೇಕಪ್‌ಗಾಗಿ ಕುಮಾರಕೋಮ್‌ಗೆ ತೆರಳುತ್ತಿದ್ದಾಗ ವಧು ಅವನಿ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ಬೆನ್ನುಮೂಳೆಗೆ ಗಂಭೀರ ಗಾಯವಾಗಿತ್ತು. ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಪಿಎಸ್ ಲೇಕ್ಶೋರ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೂ ಧೃತಿಗೆಡದ ಎರಡೂ ಕಡೆಯ ಕುಟುಂಬಸ್ಥರು, ನಿಗದಿತ ಮುಹೂರ್ತದಲ್ಲೇ ಮದುವೆ ನಡೆಸಲು ನಿರ್ಧರಿಸಿ, ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯರ ಅನುಮತಿ ಕೋರಿದರು. ವೈದ್ಯರು ಸಮ್ಮತಿಸಿದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ಘಟಕದ ಬೆಡ್ ಮೇಲೆಯೇ ಮಾಂಗಲ್ಯಧಾರಣೆ ನೆರವೇರಿತು.
ವಧುವಿನ ಚಿಕಿತ್ಸೆ ಮತ್ತು ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆ ಆಡಳಿತವು ತುರ್ತು ವಿಭಾಗದಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಟ್ಟಿತ್ತು. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹಾಗೂ ಆಪ್ತ ಸಂಬಂಧಿಗಳ ಸಮ್ಮುಖದಲ್ಲಿ ಈ ವಿವಾಹ ಸಂಪನ್ನಗೊಂಡಿತು. ಸದ್ಯ ವಧು ಅವನಿ ಅವರ ಬೆನ್ನುಮೂಳೆಗೆ ಪೆಟ್ಟಾಗಿರುವುದರಿಂದ, ಅವರಿಗೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲೂ ಕೈಬಿಡದೆ, ಆಸ್ಪತ್ರೆಯಲ್ಲೇ ಮದುವೆಯಾಗುವ ಮೂಲಕ ವರ ಶರೋನ್ ಮತ್ತು ಅವರ ಕುಟುಂಬ ಮಾದರಿಯಾಗಿದೆ.

0 Comments