ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕರ್ನಾಟಕ ಪೊಲೀಸರು ದೊಡ್ಡ ಯಶಸ್ಸನ್ನು ಕಂಡಿದ್ದಾರೆ. ಘಟನೆ ನಡೆದ ಕೇವಲ 46 ಗಂಟೆಗಳ ಒಳಗಾಗಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು, ತಮಿಳುನಾಡಿನ ಚೆನ್ನೈನಲ್ಲಿ ಬಚ್ಚಿಟ್ಟಿದ್ದ 6.3 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಈ ಕೃತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋವಿಂದಪುರ ಠಾಣೆಯ ಪೊಲೀಸ್ ಪೇದೆ ಅಣ್ಣಪ್ಪ ನಾಯ್ಕ್ ಮತ್ತು ಸಿಎಂಎಸ್ (CMS) ಸಂಸ್ಥೆಯ ಮಾಜಿ ಸಿಬ್ಬಂದಿ ರಾಜು ಸೇರಿದಂತೆ ನಾಲ್ವರು ಪ್ರಮುಖ ಆರೋಪಿಗಳನ್ನು ಚೆನ್ನೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಎಂಟು ವಿಶೇಷ ತಂಡಗಳು ನಡೆಸಿದ ಈ ತ್ವರಿತ ಕಾರ್ಯಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ದರೋಡೆ ಪ್ರಕರಣವು ನವೆಂಬರ್ 19 ರಂದು ಬುಧವಾರ ಸಂಜೆ 4:30 ರ ಸುಮಾರಿಗೆ ಜಯನಗರದ ಅಶೋಕ ಪಿಲ್ಲರ್ ಜಂಕ್ಷನ್ ಬಳಿ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಬಂದಿದ್ದ 5-6 ದರೋಡೆಗಾರರು, ಆರ್‌ಬಿಐ (RBI) ಅಧಿಕಾರಿಗಳ ಸೋಗಿನಲ್ಲಿ ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಎಟಿಎಂ ಕ್ಯಾಶ್ ವ್ಯಾನ್ ಅನ್ನು ಅಡ್ಡಗಟ್ಟಿದ್ದರು. ಸಿಬ್ಬಂದಿಯನ್ನು ಬೆದರಿಸಿ ಸುಮಾರು 7.11 ಕೋಟಿ ರೂ. ಹಣದೊಂದಿಗೆ ವ್ಯಾನ್‌ನಲ್ಲಿದ್ದ ಸಿಸಿಟಿವಿ ಡಿವಿಆರ್ (DVR) ಅನ್ನೂ ದೋಚಿದ್ದರು. ದರೋಡೆ ನಡೆದು 45 ನಿಮಿಷಗಳ ನಂತರವಷ್ಟೇ ಈ ವಿಷಯ ಹೊರಬಂದಿದ್ದರಿಂದ, ಇದು ಪರಿಚಯಸ್ಥರ ಅಥವಾ ಸಂಸ್ಥೆಯ ಒಳಗಿನವರ ಕೃತ್ಯವಿರಬಹುದು (Insider Job) ಎಂಬ ಬಲವಾದ ಶಂಕೆ ಆರಂಭದಲ್ಲೇ ವ್ಯಕ್ತವಾಗಿತ್ತು.
ತನಿಖೆಯ ವೇಳೆ ಗೋವಿಂದಪುರ ಪೊಲೀಸ್ ಠಾಣೆಯ ಪೇದೆ ಅಣ್ಣಪ್ಪ ನಾಯ್ಕ್ (38) ಈ ದರೋಡೆಯ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದೆ. ಕಳೆದ 6 ತಿಂಗಳಿನಿಂದ ಸಿಎಂಎಸ್ ಮಾಜಿ ಉದ್ಯೋಗಿ ರಾಜು (ಕೇರಳ ಮೂಲದವರು) ಜೊತೆ ಸೇರಿ ಈ ಸಂಚು ರೂಪಿಸಲಾಗಿತ್ತು. ರಾಜು ಹಣದ ಸಾಗಾಟದ ಮಾರ್ಗ ಮತ್ತು ಸಮಯದ ಮಾಹಿತಿ ನೀಡಿದರೆ, ಅಣ್ಣಪ್ಪ ನಾಯ್ಕ್ ಪೊಲೀಸ್ ತನಿಖೆಯ ರೀತಿಗಳನ್ನು ಅರಿತು ತಮಿಳುನಾಡು ಮತ್ತು ಆಂಧ್ರಪ್ರದೇಶದ ಯುವಕರ ತಂಡವನ್ನು ಸೇರಿಸಿ ತರಬೇತಿ ನೀಡಿದ್ದನು. ತಂತ್ರಜ್ಞಾನ, ಮೊಬೈಲ್ ಟ್ರ್ಯಾಕಿಂಗ್ ಹಾಗೂ ಸಿಸಿಟಿವಿ ದೃಶ್ಯಗಳ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಹಣ ಮತ್ತು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

0 Comments