ಉಡುಪಿ: ಪಾಕ್ ಪರ ಬೇಹುಗಾರಿಕೆ; ಕೊಚ್ಚಿನ್ ಶಿಪ್‌ಯಾರ್ಡ್‌ನ ಇಬ್ಬರು ನೌಕರರ ಬಂಧನ

 

Ad
ಉಡುಪಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಗಂಭೀರ ಆರೋಪದಡಿ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬುವವರೇ ಬಂಧಿತ ಆರೋಪಿಗಳು. ಇವರು ಭಾರತೀಯ ನೌಕಾಪಡೆಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಹಡಗುಗಳನ್ನು ನಿರ್ಮಿಸುವ ಈ ಮಹತ್ವದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಕಳೆದ ಒಂದೂವರೆ ವರ್ಷದಿಂದ ಹಡಗುಗಳ ವಿನ್ಯಾಸ, ತಾಂತ್ರಿಕ ಮಾಹಿತಿ ಹಾಗೂ ಇನ್ನಿತರ ಗೌಪ್ಯ ವಿಚಾರಗಳನ್ನು ವಾಟ್ಸ್ಆ್ಯಪ್ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಸಂಪರ್ಕಗಳಿಗೆ ರವಾನಿಸುತ್ತಿದ್ದರು ಎಂಬ ಆಘಾತಕಾರಿ ಸಂಗತಿ ತನಿಖೆಯಿಂದ ಬಯಲಾಗಿದೆ. ಮಾಹಿತಿಯನ್ನು ಹಂಚಿಕೊಳ್ಳಲು ಇವರು ಹಣವನ್ನು ಪಡೆಯುತ್ತಿದ್ದರು ಎನ್ನಲಾಗಿದ್ದು, ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದಲೇ ಈ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ಈ ಕೃತ್ಯ ದೇಶದ ಆಂತರಿಕ ಭದ್ರತೆಗೆ ದೊಡ್ಡ ಆತಂಕವನ್ನು ಉಂಟುಮಾಡಿದೆ.

ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ಅವರಿಗೆ ಉಂಟಾದ ಅನುಮಾನದ ಮೇರೆಗೆ ನೀಡಿದ ದೂರಿನ ಅನ್ವಯ, ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಗೌಪ್ಯ ಮಾಹಿತಿ ಮಾರಾಟ ಮಾಡಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗಳು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Post a Comment

0 Comments