ಬಂಟ್ವಾಳ: ಕಾರು-ಸ್ಕೂಟರ್ ನಡುವೆ ಭೀಕರ ಅಪಘಾತ; ಕಡಬ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

 

Ad
ಬಂಟ್ವಾಳ: ಇಲ್ಲಿನ ಕಾವಳಕಟ್ಟೆ ಸಮೀಪ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರೆಯಾಗಿದ್ದ ಯುವತಿಯೋರ್ವರು ಮೃತಪಟ್ಟ ದಾರುಣ ಘಟನೆ ನವೆಂಬರ್ 19ರಂದು ನಡೆದಿದೆ. ಮೃತ ದುರ್ದೈವಿಯನ್ನು ಕಡಬದ ಕುಂತೂರು ನಿವಾಸಿ, ಶ್ರೀ ದುರ್ಗಾ ಎಲೆಕ್ಟ್ರಿಕಲ್ಸ್ ಮಾಲೀಕ ಸುನಿಲ್ ಕೊಲತ್ತಾಯ ಅವರ ಪುತ್ರಿ ಅನನ್ಯಾ (21) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಸ್ಕೂಟರ್‌ನಲ್ಲಿದ್ದ ಸಹ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಅನನ್ಯಾ ಮತ್ತು ಗಾಯಾಳು ಪೃಥ್ವಿ ಇವರಿಬ್ಬರೂ ಮಂಗಳೂರಿನ ಕಾಲೇಜೊಂದರಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿರುವ ಪೃಥ್ವಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ತಕ್ಷಣ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭವಿಷ್ಯದ ಕನಸು ಹೊತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ಕಡಬ ಮೂಲದ ಪ್ರತಿಭಾವಂತ ವಿದ್ಯಾರ್ಥಿನಿಯ ಅಕಾಲಿಕ ಮರಣವು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Post a Comment

0 Comments