ಬುರ್ಕಾ ಧರಿಸಿ ಬಂದು ಪತಿಯ ಮೇಲೆಯೇ ಕತ್ತಿಯಿಂದ ಹಲ್ಲೆ ನಡೆಸಿದ ಪತ್ನಿ: ಬಂಟ್ವಾಳದಲ್ಲಿ ಘಟನೆ

 

Ad
ಬಂಟ್ವಾಳ: ಇಲ್ಲಿನ ಸೋಮಯಾಜಿ ಟೆಕ್ಸಟೈಲ್ಸ್ ಮಾಲೀಕ ಕೃಷ್ಣ ಕುಮಾರ್ ಸೋಮಯಾಜಿ ಅವರ ಮೇಲೆ ಬುರ್ಕಾ ಧರಿಸಿ ಬಂದ ಮಹಿಳೆಯೊಬ್ಬರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನವೆಂಬರ್ 19ರಂದು ಸಂಜೆ ನಡೆದಿದೆ. ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಕೃಷ್ಣ ಕುಮಾರ್ ಅವರು ತಮ್ಮ ಅಂಗಡಿಯಲ್ಲಿದ್ದಾಗ, ಗ್ರಾಹಕರ ಸೋಗಿನಲ್ಲಿ ಬುರ್ಕಾ ಧರಿಸಿ ಬಂದ ಮಹಿಳೆ ಏಕಾಏಕಿ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ತಪ್ಪಿಸಿಕೊಳ್ಳಲು ಕೃಷ್ಣ ಕುಮಾರ್ ಅವರು ಅಂಗಡಿಯಿಂದ ಹೊರಗೆ ಓಡಿದ್ದು, ತಕ್ಷಣವೇ ಅವರನ್ನು ಆಟೋ ರಿಕ್ಷಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ತನಿಖೆಯ ವೇಳೆ ಹಲ್ಲೆ ನಡೆಸಿದ ಮಹಿಳೆ ಸ್ವತಃ ಕೃಷ್ಣ ಕುಮಾರ್ ಅವರ ಪತ್ನಿ ಜ್ಯೋತಿ ಕೆ.ಟಿ. ಎಂದು ಗುರುತಿಸಲಾಗಿದೆ. ದಂಪತಿಗಳ ನಡುವೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಿದ್ದು, ಇದೇ ದ್ವೇಷದಿಂದ ಪತಿಯನ್ನು ಕೊಲ್ಲುವ ಉದ್ದೇಶದಿಂದಲೇ ಆರೋಪಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಆರೋಪಿ ಅಂಗಡಿಗೆ ಬಂದು ಜೀವ ಬೆದರಿಕೆ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

0 Comments