ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಒಂದು ಅಪರೂಪದ ಹಾಗೂ ವಿಚಿತ್ರ ಆಕಾರದ ಹಂದಿಮರಿ ಜನಿಸಿದ್ದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ಬೋಜಕಿ ಹಾಗೂ ಗಣೇಶ ಅವರು ಸಾಕಿದ ಹಂದಿಯು ಶನಿವಾರದಂದು ಮರಿಗಳಿಗೆ ಜನ್ಮ ನೀಡಿದ್ದು, ಇವುಗಳಲ್ಲಿ ಒಂದು ಮರಿಯು ಎಲ್ಲರ ಗಮನ ಸೆಳೆಯುವಂತಹ ವಿಚಿತ್ರ ರೂಪವನ್ನು ಹೊಂದಿತ್ತು. ಈ ಬಗ್ಗೆ ಮಾಹಿತಿ ನೀಡಿದ ಗಣೇಶ ಅವರು, ವಿಚಿತ್ರ ಆಕಾರದ ಈ ಮರಿಯು ಕೇವಲ 20 ನಿಮಿಷಗಳ ಕಾಲ ಬದುಕಿತ್ತು ಎಂದು ತಿಳಿಸಿದ್ದಾರೆ.
ಈ ಮರಿಯ ವಿಚಿತ್ರ ಆಕಾರದ ಕುರಿತು ವಿವರಿಸಿದ ಅವರು, ಹಂದಿಮರಿಯ ತಲೆಯ ಮೇಲೆ ಸೊಂಡಿಲಿನಂತಹ ರಚನೆ ಇತ್ತು. ಅಷ್ಟೇ ಅಲ್ಲದೆ, ಸೊಂಡಿಲಿನ ಕೆಳಗೆ ದೊಡ್ಡದಾದ ಒಂದೇ ಕಣ್ಣು ಇದ್ದು, ಅದರೊಳಗೆ ಇನ್ನೊಂದು ಕಣ್ಣು ಇರುವುದು ಕಂಡು ಬಂದಿತ್ತು. ಇದಲ್ಲದೆ, ಈ ಮರಿಯ ನಾಲಿಗೆಯು ಮನುಷ್ಯನ ಆಕಾರವನ್ನು ಹೋಲುತ್ತಿತ್ತು. ಮೈಯ ಮೇಲೆ ಕೂದಲು ಇರಲಿಲ್ಲ, ಜೊತೆಗೆ ಮರಿಯ ಉಗುರಿನ ಬಣ್ಣದಲ್ಲೂ ಬದಲಾವಣೆ ಕಂಡು ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಸಾಕು ಪ್ರಾಣಿಯ ಮರಿಗಳು ವಿಚಿತ್ರ ರೂಪದಲ್ಲಿ ಜನಿಸುವುದು ಅಪರೂಪವಾದರೂ, ಕೆಲವೊಮ್ಮೆ ಜೈವಿಕ ಅಥವಾ ಆನುವಂಶಿಕ ಕಾರಣಗಳಿಂದ ಈ ರೀತಿಯ ಆಕಾರದ ವೈಪರೀತ್ಯಗಳು ಕಂಡುಬರುತ್ತವೆ. ಈ ವಿಚಿತ್ರ ಸ್ವರೂಪದ ಹಂದಿಮರಿಯ ಸುದ್ದಿಯು ಗಾಳಿಬೀಡು ಗ್ರಾಮದಲ್ಲಿ ಶೀಘ್ರವಾಗಿ ಹರಡಿದ್ದು, ಕುತೂಹಲ ಮೂಡಿಸಿದೆ. ಪ್ರಾಣಿ ಸಾಕಣೆ ಮಾಡುವವರಲ್ಲಿ ಇದು ಆಶ್ಚರ್ಯ ಮತ್ತು ಆತಂಕ ಎರಡನ್ನೂ ಉಂಟು ಮಾಡಿದೆ.

0 Comments