ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾದ ಕಾರಣ, ಬುಧವಾರ ಅವರು ಬೆಳಗಾವಿಯ ಸುವರ್ಣ ವಿಧಾನಸೌಧದ ಕಲಾಪಗಳಿಂದ ದೂರ ಉಳಿದರು. ತೀವ್ರ ಹೊಟ್ಟೆನೋವು ಹಾಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರು ನಗರದ ಪ್ರವಾಸಿ ಮಂದಿರದಲ್ಲೇ (ಸರ್ಕ್ಯೂಟ್ ಹೌಸ್) ವಿಶ್ರಾಂತಿ ಪಡೆದರು.
ಪ್ರತಿಭಟನೆಯಲ್ಲಿ ಭಾಗಿ:
ಆರೋಗ್ಯ ಸಮಸ್ಯೆಯ ನಡುವೆಯೂ ಬೆಳಿಗ್ಗೆ ಸುವರ್ಣ ವಿಧಾನಸೌಧದ ಆವರಣದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಸಿಎಂ ಪಾಲ್ಗೊಂಡಿದ್ದರು. ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಸುಮಾರು ಒಂದು ತಾಸು ಧರಣಿ ನಡೆಸಿದರು. ಬಳಿಕ ಸದನದೊಳಗೆ ತೆರಳಿದ ಅವರು, ಕೆಲವೇ ಸಮಯದಲ್ಲಿ ಅಸ್ವಸ್ಥರಾಗಿ ಮರಳಿ ಪ್ರವಾಸಿ ಮಂದಿರಕ್ಕೆ ತೆರಳಿದರು.
ಗಣ್ಯರ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಸಚಿವ ಭೈರತಿ ಸುರೇಶ್ ಹಾಗೂ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. ಪ್ರಸ್ತುತ ಸಿಎಂ ಚೇತರಿಸಿಕೊಳ್ಳುತ್ತಿದ್ದು, ಗುರುವಾರದ ಕಲಾಪದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

0 Comments