ಮಂಗಳೂರು: ಕರಾವಳಿ ಮತ್ತು ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರೈಲ್ವೇ ಮಾರ್ಗದಲ್ಲಿ ಶೀಘ್ರದಲ್ಲೇ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳು ಸಂಚರಿಸಲಿವೆ. ಬಹುದಿನಗಳ ಬೇಡಿಕೆಯಾಗಿದ್ದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ 55 ಕಿ.ಮೀ. ಉದ್ದದ ದುರ್ಗಮ ಘಾಟಿ ವಿಭಾಗದ ವಿದ್ಯುದೀಕರಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಈ ಕಾಮಗಾರಿ ಪೂರ್ಣಗೊಂಡರೆ ಮಂಗಳೂರು-ಬೆಂಗಳೂರು ಮತ್ತು ಕಾರವಾರ ನಡುವಿನ ರೈಲುಗಳು ಎಂಜಿನ್ ಬದಲಾವಣೆಯ ಕಿರಿಕಿರಿ ಇಲ್ಲದೆ ವೇಗವಾಗಿ ಸಂಚರಿಸಲಿವೆ. ಅಲ್ಲದೆ, ಈ ಮಾರ್ಗದಲ್ಲಿ 'ವಂದೇ ಭಾರತ್' ರೈಲು ಓಡಿಸಲು ಹಳಿಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯೂ ಚಾಲನೆಯಲ್ಲಿದೆ.
ಮತ್ತೊಂದೆಡೆ, ವಿದ್ಯುದೀಕರಣ ಕಾಮಗಾರಿಗಾಗಿ ಸ್ಥಗಿತಗೊಳಿಸಲಾಗಿದ್ದ ಹಗಲು ರೈಲುಗಳ ಸಂಚಾರ ಇಂದಿನಿಂದ ಪುನರಾರಂಭಗೊಂಡಿದೆ. ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳವಾರದಿಂದಲೇ ಸಂಚಾರ ಆರಂಭಿಸಿದ್ದು, ಯಶವಂತಪುರ-ಮಂಗಳೂರು/ಕಾರವಾರ ಎಕ್ಸ್‌ಪ್ರೆಸ್ ಬುಧವಾರದಿಂದ ಹಾಗೂ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಶನಿವಾರದಿಂದ ಎಂದಿನಂತೆ ಸಂಚರಿಸಲಿವೆ. ಇದರಿಂದ ಪ್ರಯಾಣಿಕರಿಗೆ ದೀರ್ಘಾವಧಿಯ ನಂತರ ಹಗಲು ಪ್ರಯಾಣದ ಸೌಲಭ್ಯ ಮರಳಿ ದೊರೆತಂತಾಗಿದೆ.

0 Comments