ಮಂಗಳೂರು: ಬೈಕ್ ಕಳ್ಳತನ ಹಾಗೂ ಸರಗಳ್ಳತನ ಪ್ರಕರಣ; ಇಬ್ಬರು ಅಂತರರಾಜ್ಯ ಆರೋಪಿಗಳ ಬಂಧನ

 

Ad
ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಯಮಹಾ FZ ಬೈಕ್ ಕಳ್ಳತನ ಹಾಗೂ ಭಟ್ಕಳದಲ್ಲಿ ವೃದ್ಧೆಯ ಸರ ಕಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಇಬ್ಬರು ಕುಖ್ಯಾತ ಅಂತರರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಉಳ್ಳಾಲದ ಪೈಸಲ್ ಅಲಿಯಾಸ್ ತೋಟ ಪೈಸಲ್ ಹಾಗೂ ಮೈಸೂರಿನ ನಿತೀನ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಂದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಒಟ್ಟು 1.65 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಸೆಂಬರ್ 12 ರಂದು ಯೆಯ್ಯಾಡಿಯಲ್ಲಿ ಬೈಕ್ ಕಳ್ಳತನವಾದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಡಿ. 16 ರಂದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಭಟ್ಕಳದ ಬೆಳಕೆ ಪ್ರದೇಶದಲ್ಲಿ 70 ವರ್ಷದ ಹೊನ್ನಮ್ಮ ಎಂಬ ವೃದ್ಧೆಯ ಚಿನ್ನದ ಸರ ಕಸಿದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರ ಪೈಕಿ ತೋಟ ಪೈಸಲ್ ಎಂಬಾತನ ಮೇಲೆ ಕರ್ನಾಟಕ ಮತ್ತು ಕೇರಳದ ವಿವಿಧೆಡೆ ಕೊಲೆ, ದರೋಡೆ ಸೇರಿದಂತೆ ಒಟ್ಟು 42 ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ 10ಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್‌ಗಳು ಜಾರಿಯಲ್ಲಿದ್ದವು ಎಂದು ತಿಳಿದುಬಂದಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಅನಂತ ಪದ್ಮನಾಭ ಮತ್ತು ಪಿಎಸ್‌ಐ ಮನೋಹರ್ ಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಎಸ್‌ಐಗಳು ಹಾಗೂ ಕದ್ರಿ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಅಂತರರಾಜ್ಯ ಕಳ್ಳರನ್ನು ಬಂಧಿಸುವ ಮೂಲಕ ಪೊಲೀಸರು ಪ್ರಮುಖ ಜಾಲವೊಂದನ್ನು ಭೇದಿಸಿದಂತಾಗಿದೆ.

Post a Comment

0 Comments