: ರಾಜ್ಯ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡಲಾಗುವ ಮೊಟ್ಟೆಯ ದರ ಏರಿಕೆಯಾಗಿರುವುದು ಈಗ ಶಿಕ್ಷಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರವು ಒಂದು ಮೊಟ್ಟೆಗೆ ಕೇವಲ 6 ರೂ. ನಿಗದಿಪಡಿಸಿದ್ದರೆ, ಮಾರುಕಟ್ಟೆಯಲ್ಲಿ ಸದ್ಯ ಮೊಟ್ಟೆಯ ಬೆಲೆ 8 ರೂ.ಗೆ ತಲುಪಿದೆ. ಇದರಿಂದಾಗಿ ಪ್ರತಿ ಮೊಟ್ಟೆಯ ಮೇಲೆ ಶಿಕ್ಷಕರು ಸುಮಾರು 2.80 ರೂ.ನಿಂದ 3 ರೂ. ವರೆಗೆ ತಮ್ಮ ಸ್ವಂತ ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸರ್ಕಾರ ನೀಡುವ 6 ರೂಪಾಯಿಯಲ್ಲಿ ಮೊಟ್ಟೆ ಖರೀದಿ ಮಾತ್ರವಲ್ಲದೆ, ಅಡುಗೆ ಅನಿಲ ಮತ್ತು ಮೊಟ್ಟೆ ಸುಲಿಯುವವರಿಗೆ ನೀಡುವ ಕೂಲಿಯೂ ಸೇರಿದೆ. ಆದರೆ, ಪ್ರಸ್ತುತ ಮಾರುಕಟ್ಟೆ ದರದಲ್ಲಿ ಮೊಟ್ಟೆಗೇ 8 ರೂಪಾಯಿ ಖರ್ಚಾಗುತ್ತಿರುವುದರಿಂದ, ಅಡುಗೆಯವರ ಹಣವನ್ನೂ ಶಿಕ್ಷಕರೇ ಭರಿಸುತ್ತಿದ್ದಾರೆ. ಕನಿಷ್ಠ 100 ಮಕ್ಕಳಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ತಿಂಗಳಿಗೆ 9 ರಿಂದ 10 ಸಾವಿರ ರೂ. ಹೆಚ್ಚುವರಿ ಹೊರೆ ಬೀಳುತ್ತಿದ್ದು, ಇದು ಅವರ ಕುಟುಂಬ ನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಶಾಲೆಗಳಲ್ಲಿ ಮೊಟ್ಟೆ ಸಂಗ್ರಹಿಸಿಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಹೋಲ್‌ಸೇಲ್ ದರದಲ್ಲಿ ಒಟ್ಟಿಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಸರ್ಕಾರವು ಮೊಟ್ಟೆಯ ಅನುದಾನವನ್ನು ಕನಿಷ್ಠ 9 ರೂ.ಗೆ ಏರಿಸಬೇಕೆಂದು ತುಮಕೂರಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.

0 Comments