ನಿಂತಿಕಲ್ಲು ಗ್ರಾಮದ ಬಸ್ ನಿಲ್ದಾಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ರಾತ್ರಿ ವೇಳೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆ ಕಳೆಯುತ್ತಿದ್ದಂತೆ ಬಸ್ ನಿಲ್ದಾಣದ ಸುತ್ತಮುತ್ತ ದಾರಿದೀಪಗಳಿಲ್ಲದೆ ಕತ್ತಲು ಆವರಿಸುತ್ತದೆ. ಇದರಿಂದಾಗಿ ಪ್ರಯಾಣಿಕರು ಭಯಭೀತರಾಗಿ ಬಸ್ಸಿಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ನಿಲ್ದಾಣದ ಸುತ್ತ ಅಳವಡಿಸಲಾದ ಸೋಲಾರ್ ದೀಪಗಳು ಸಹ ಉರಿಯದೆ ನಿಷ್ಕ್ರಿಯಗೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ಬೆಳೆಯುತ್ತಿರುವ ನಿಂತಿಕಲ್ಲು ಗ್ರಾಮಕ್ಕೆ ಕೆಲಸದ ನಿಮಿತ್ತ ಅಥವಾ ಇತರೆ ಕಾರಣಗಳಿಗಾಗಿ ಬೇರೆ ಊರುಗಳಿಂದ ಬರುವ ಪ್ರಯಾಣಿಕರು ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕತ್ತಲೆಯಿಂದಾಗಿ ರಸ್ತೆಯಲ್ಲಿ ಅಥವಾ ನಿಲ್ದಾಣದಲ್ಲಿ ನಿಲ್ಲಲು ಭಯವಾಗುತ್ತದೆ, ಸೂಕ್ತ ವ್ಯವಸ್ಥೆ ಇಲ್ಲದೆ ಏನು ಮಾಡುವುದು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಈ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ ಎಂಬುದು ಅವರ ಅಳಲು.
ಈ ಹಿನ್ನೆಲೆಯಲ್ಲಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೊದಲು ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶಕ್ಕೆ ಕನಿಷ್ಠ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಪ್ರಯಾಣಿಕರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ. ಕೂಡಲೇ ದಾರಿದೀಪಗಳನ್ನು ಮತ್ತು ನಿಷ್ಕ್ರಿಯಗೊಂಡಿರುವ ಸೋಲಾರ್ ದೀಪಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡಬೇಕಿದೆ.

0 Comments