ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುದ್ದಿಯಲ್ಲಿದ್ದ ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹವು ಅಂತಿಮವಾಗಿ ರದ್ದಾಗಿದೆ. ನವೆಂಬರ್ 23, 2025 ರಂದು ವಿವಾಹ ನಿಗದಿಪಡಿಸಲಾಗಿತ್ತು ಮತ್ತು ವಿವಾಹಪೂರ್ವ ಸಮಾರಂಭಗಳು ಕೂಡ ಪ್ರಾರಂಭವಾಗಿದ್ದವು. ಆದರೆ ಸಂಗೀತ ಕಾರ್ಯಕ್ರಮದ ನಂತರ ಮದುವೆಯನ್ನು ಮುಂದೂಡಲಾಯಿತು. ಇದಕ್ಕೆ ಸ್ಮೃತಿ ಮಂಧಾನಾ ಅವರ ತಂದೆಯವರಿಗೆ ಹೃದಯಾಘಾತವಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು ಕಾರಣ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಪಲಾಶ್ ಮುಚ್ಚಲ್ ಸಹ ಆಸ್ಪತ್ರೆಗೆ ದಾಖಲಾಗಿದ್ದು, ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವಂಚನೆ ಆರೋಪಗಳು ಕೇಳಿಬಂದಿದ್ದವು.
ಈ ಬೆಳವಣಿಗೆಗಳ ನಂತರ, ಮದುವೆಯ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಸತ್ಯಾಂಶವನ್ನು ತಿಳಿಯಲು ಅಭಿಮಾನಿಗಳು ಸ್ಮೃತಿ ಅಥವಾ ಪಲಾಶ್ ಅವರ ಅಧಿಕೃತ ಹೇಳಿಕೆಗಾಗಿ ಕಾಯುತ್ತಿದ್ದರು. ಅಂತಿಮವಾಗಿ, ಡಿಸೆಂಬರ್ 7, 2025 ರಂದು ಸ್ಮೃತಿ ಮಂಧಾನಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಧಿಕೃತ ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. "ಕಳೆದ ಕೆಲವು ವಾರಗಳಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು, ಆದ್ದರಿಂದ ನಾನು ಈಗ ಮಾತನಾಡಬೇಕೆಂದು ಅನಿಸಿದೆ. ನಾನು ಖಾಸಗಿತನವನ್ನು ಉಳಿಸಿಕೊಳ್ಳಲು ಬಯಸುತ್ತೇನೆ. ಪಲಾಶ್ ಮುಚ್ಚಲ್ ಅವರೊಂದಿಗಿನ ನನ್ನ ವಿವಾಹವನ್ನು ರದ್ದುಗೊಳಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕಷ್ಟದ ಸಮಯದಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಮುಂದೆ ಸಾಗಲು ಅವಕಾಶ ನೀಡಬೇಕು ಎಂದು ಸ್ಮೃತಿ ಮಂಧಾನಾ ಅವರು ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. "ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಉನ್ನತ ಉದ್ದೇಶವಾಗಿದೆ ಮತ್ತು ಯಾವಾಗಲೂ ಇದೆ" ಎಂದು ಬರೆಯುವ ಮೂಲಕ, ತಮ್ಮ ಗಮನವು ವೃತ್ತಿಜೀವನದ ಮೇಲೆ ಕೇಂದ್ರೀಕೃತವಾಗಿದೆ ಎಂಬುದನ್ನು ಅವರು ಮತ್ತೊಮ್ಮೆ ದೃಢಪಡಿಸಿದ್ದಾರೆ.

0 Comments