ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದ ಎತ್ತಂಗಡಿ ಆಗುವ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾರಿ ಗುಡ್‌ನ್ಯೂಸ್ ನೀಡಿದ್ದಾರೆ. 2026ರ ಐಪಿಎಲ್‌ನ 19ನೇ ಆವೃತ್ತಿಯ ಆರ್‌ಸಿಬಿ ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂದು ಖುದ್ದು ಡಿಸಿಎಂ ಘೋಷಣೆ ಮಾಡುವ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.
ನಗರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯ ಮತದಾನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವದ ವಿಷಯವನ್ನು ಸ್ಪಷ್ಟಪಡಿಸಿದರು. "ನಾನು ಕ್ರಿಕೆಟ್ ಪ್ರೇಮಿ. ಆರ್‌ಸಿಬಿ ನಮ್ಮ ಹೆಮ್ಮೆ. ಯಾವುದೇ ಕಾರಣಕ್ಕೂ ನಮ್ಮಿಂದ ಐಪಿಎಲ್ ಕೈ ತಪ್ಪೋದಿಲ್ಲ. ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುತ್ತವೆ. ನಾನು ಎಲ್ಲರೊಂದಿಗೆ ಮಾತನಾಡಿ ಈ ವ್ಯವಸ್ಥೆ ಮಾಡುತ್ತೇನೆ" ಎಂದು ಡಿಸಿಎಂ ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಘೋಷಣೆಯಿಂದಾಗಿ, ಬೆಂಗಳೂರು ಮೂಲದ ಆರ್‌ಸಿಬಿ ತಂಡವು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳಬಹುದು ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಆ ಮೂಲಕ, ಬೆಂಗಳೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ತವರು ನೆಲದಲ್ಲೇ ನೋಡುವ ಅವಕಾಶ ಖಚಿತಗೊಂಡಿದ್ದು, ಇದು ಆರ್ ಸಿಬಿ ಫ್ಯಾನ್ಸ್ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

0 Comments