ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. 2026ರ ಸಂವತ್ಸರವನ್ನು ಸ್ವಾಗತಿಸಲು ಪ್ರಪಂಚದಾದ್ಯಂತ ಸಂಭ್ರಮದ ಸಿದ್ಧತೆಗಳು ಜೋರಾಗಿವೆ. ಪ್ರತಿವರ್ಷ ಡಿಸೆಂಬರ್ 31ರ ರಾತ್ರಿ ಪಾರ್ಟಿ, ಸಂಭ್ರಮ, ಮೋಜು-ಮಸ್ತಿಯೊಂದಿಗೆ ಹಳೆಯ ವರ್ಷಕ್ಕೆ ವಿದಾಯ ಹೇಳಿ ಜನವರಿ 1ರಂದು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಪರಿಪಾಠ ನಡೆದುಕೊಂಡು ಬಂದಿದೆ. ಆದರೆ ಜನವರಿ 1ನೇ ತಾರೀಖನ್ನೇ ಹೊಸ ವರ್ಷದ ಆರಂಭವಾಗಿ ಏಕೆ ಆಚರಿಸಲಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರ ಇತಿಹಾಸದಲ್ಲಿ ಅಡಗಿದೆ.
ಹೊಸ ವರ್ಷ ಆಚರಣೆಯ ಇತಿಹಾಸ
ಪ್ರಪಂಚದಾದ್ಯಂತ ಹೊಸ ವರ್ಷದ ಆಚರಣೆ ಇಂದು ಗ್ರೆಗೋರಿಯನ್ ಕ್ಯಾಲೆಂಡರ್ ಆಧಾರಿತವಾಗಿದೆ. ಜನವರಿ 1ರಂದು ಹೊಸ ವರ್ಷ ಆಚರಿಸುವ ಪದ್ಧತಿ ಅಧಿಕೃತವಾಗಿ ಅಕ್ಟೋಬರ್ 15, 1582ರಿಂದ ಜಾರಿಗೆ ಬಂತು.
ಈ ಮೊದಲು ಹೊಸ ವರ್ಷವನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತಿತ್ತು. ಕೆಲ ದೇಶಗಳಲ್ಲಿ ಮಾರ್ಚ್ 25ರಂದು, ಮತ್ತೆ ಕೆಲ ಕಡೆ ಡಿಸೆಂಬರ್ 25ರಂದು ಹೊಸ ವರ್ಷವನ್ನು ಸ್ವಾಗತಿಸುವ ಸಂಪ್ರದಾಯವಿತ್ತು. ಪ್ರಾಚೀನ ರೋಮ್‌ನಲ್ಲಿ ಮಾರ್ಚ್ ತಿಂಗಳು ಯುದ್ಧದ ದೇವರೊಂದಿಗೆ ಸಂಬಂಧ ಹೊಂದಿದ್ದ ಕಾರಣ, ಅದನ್ನೇ ವರ್ಷದ ಆರಂಭವೆಂದು ಪರಿಗಣಿಸಲಾಗುತ್ತಿತ್ತು.
ಆರಂಭಿಕ ರೋಮನ್ ಕ್ಯಾಲೆಂಡರ್‌ನಲ್ಲಿ ಕೇವಲ 10 ತಿಂಗಳುಗಳು ಮಾತ್ರ ಇದ್ದವು. ಒಂದು ವರ್ಷದಲ್ಲಿ ಸುಮಾರು 310 ದಿನಗಳು ಮತ್ತು ವಾರದಲ್ಲಿ 8 ದಿನಗಳು ಇರುತ್ತಿದ್ದವು. ವಸಂತಕಾಲದ ಆರಂಭವನ್ನು ಸೂಚಿಸುವ ‘ಅಕಿಟು’ ಹಬ್ಬವನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತಿತ್ತು.
ಜೂಲಿಯನ್ ಕ್ಯಾಲೆಂಡರ್‌ನ ಆರಂಭ
ಕ್ರಿ.ಪೂ. 46ರಲ್ಲಿ, ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರ್ ಅವರು ಜೂಲಿಯನ್ ಕ್ಯಾಲೆಂಡರ್ ಅನ್ನು ಜಾರಿಗೆ ತಂದರು. ಈ ಕ್ಯಾಲೆಂಡರ್‌ನಲ್ಲಿ ವರ್ಷವನ್ನು 12 ತಿಂಗಳುಗಳಾಗಿ ವಿಂಗಡಿಸಲಾಯಿತು.
ಖಗೋಳಶಾಸ್ತ್ರಜ್ಞರ ಸಲಹೆ ಪಡೆದ ಸೀಸರ್, ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಹಾಕಲು 365 ದಿನಗಳು ಮತ್ತು 6 ಗಂಟೆಗಳು ಬೇಕು ಎಂಬ ವೈಜ್ಞಾನಿಕ ಸತ್ಯವನ್ನು ಗಣನೆಗೆ ತೆಗೆದುಕೊಂಡರು. ಇದರೊಂದಿಗೆ ವರ್ಷವನ್ನು 310 ದಿನಗಳಿಂದ 365 ದಿನಗಳಿಗೆ ವಿಸ್ತರಿಸಲಾಯಿತು.
ಗ್ರೆಗೋರಿಯನ್ ಕ್ಯಾಲೆಂಡರ್ – ಜನವರಿ 1ರ ಮಹತ್ವ
ನಂತರ ಇಟಲಿಯ ವೈದ್ಯ ಮತ್ತು ಖಗೋಳಶಾಸ್ತ್ರಜ್ಞ ಅಲೋಶಿಯಸ್ ಲಿಲಿಯಸ್ ಅವರು ರೋಮನ್ ಕ್ಯಾಲೆಂಡರ್‌ನಲ್ಲಿ ಅಗತ್ಯ ಸುಧಾರಣೆಗಳನ್ನು ಮಾಡಿ ಹೊಸ ಕ್ಯಾಲೆಂಡರ್ ರೂಪಿಸಿದರು. ಅದೇ ಗ್ರೆಗೋರಿಯನ್ ಕ್ಯಾಲೆಂಡರ್.
ಈ ಕ್ಯಾಲೆಂಡರ್‌ನಲ್ಲಿ ಜನವರಿ 1ನೇ ತಾರೀಖನ್ನು ವರ್ಷದ ಮೊದಲ ದಿನವೆಂದು ಘೋಷಿಸಲಾಯಿತು. ಅಂದಿನಿಂದಲೇ ಜನವರಿ 1ರಂದು ಹೊಸ ವರ್ಷ ಆಚರಿಸುವ ಸಂಪ್ರದಾಯ ಪ್ರಪಂಚದಾದ್ಯಂತ ವ್ಯಾಪಕವಾಗಿ ಅಂಗೀಕಾರಗೊಂಡಿತು.
ಭಾರತದಲ್ಲಿ ಹೊಸ ವರ್ಷದ ವಿಭಿನ್ನ ಆಚರಣೆಗಳು
ಭಾರತದಲ್ಲಿ ಹೊಸ ವರ್ಷದ ಆಚರಣೆಗಳು ಪ್ರದೇಶ, ಸಂಸ್ಕೃತಿ ಮತ್ತು ಧರ್ಮದ ಪ್ರಕಾರ ವಿಭಿನ್ನವಾಗಿವೆ.
ಪಂಜಾಬ್: ಏಪ್ರಿಲ್ 13ರಂದು ಬೈಸಾಖಿ ಹಬ್ಬದಂದು ಹೊಸ ವರ್ಷ
ಸಿಖ್ಖರು: ನಾನಾಕ್ಷಾಹಿ ಕ್ಯಾಲೆಂಡರ್ ಪ್ರಕಾರ ಮಾರ್ಚ್‌ನಲ್ಲಿ ಹೊಸ ವರ್ಷ
ಜೈನರು: ದೀಪಾವಳಿಯ ಎರಡನೇ ದಿನ ಹೊಸ ವರ್ಷ
ಹಿಂದೂಗಳು: ಯುಗಾದಿ, ಗುಡಿ ಪಾಡವಾ, ವಿಷು, ಪೊಯ್ಲಾ ಬೊಯ್ಷಾಖ್ ಮುಂತಾದ ದಿನಗಳಲ್ಲಿ ಹೊಸ ವರ್ಷ ಆಚರಣೆ
ಇಂದು ನಾವು ಸಂಭ್ರಮದಿಂದ ಆಚರಿಸುವ ಜನವರಿ 1ರ ಹೊಸ ವರ್ಷವು ಕೇವಲ ಪಾರ್ಟಿ ಸಂಸ್ಕೃತಿ ಮಾತ್ರವಲ್ಲ, ಅದು ಸಾವಿರಾರು ವರ್ಷಗಳ ಇತಿಹಾಸ, ಖಗೋಳ ವಿಜ್ಞಾನ ಮತ್ತು ಕ್ಯಾಲೆಂಡರ್ ಸುಧಾರಣೆಯ ಫಲವಾಗಿದೆ. ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ಆಶೆ-ಆಕಾಂಕ್ಷೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವುದು ಮಾನವ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿಯೇ ಉಳಿದಿದೆ.

0 Comments